Wednesday, November 3, 2010

ಸಂಸ್ಕಾರ


’ಸ್ವಭಾವ ಸುಂದರಂ ವಸ್ತು ನ ಸಂಸ್ಕಾರಮಪೇಕ್ಷತೇ’ - ಪ್ರಕೃತ್ಯಾ ಚೆಲುವಾದ ಪದಾರ್ಥವು ಸಂಸ್ಕಾರವನ್ನು ಬಯಸುವುದಿಲ್ಲ. ಅಭಿಜ್ಞಾನ ಶಾಕುಂತಲದ ಈ ಮಾತು ಸಂಸ್ಕಾರದ ಮಹತ್ತ್ವವನ್ನು ಎತ್ತಿ ಹೇಳುತ್ತಿದೆ. ಲೋಹ, ಶಿಲೆ, ಮಣ್ಣು, ಬೀಜ, ಮನುಷ್ಯ, ಮಾತು ಮುಂತಾಗಿ ಎಲ್ಲವೂ ಸಂಸ್ಕಾರಕ್ಕೆ ಒಳಪಟ್ಟಾಗ ತತ್ತದ್ವಸ್ತು ವ್ಯಕ್ತಿಗಳಲ್ಲಿ ಒಂದಾನೊಂದು ಕಾಂತಿ, ಪಾಕ, ಸೌಂದರ್ಯ, ಸತ್ತ್ವಾತಿಶಯತೆಗಳು ಕಂಡುಬರುತ್ತವೆ. ನಮ್ಮ ಕೈತುತ್ತಿನಲ್ಲಿರುವ ಅನ್ನದ ಅಗುಳೂ ಕೂಡ ಅನೇಕ ಸಂಸ್ಕಾರಗಳನ್ನು ಹೊಂದಿ ಪಕ್ವವಾಗಿ ಪ್ರಾಣಧಾರಣೆಗೆ ಅನುವಾಗಿ ಬಂದಿರುತ್ತದೆ. ಮಾತು ವ್ಯಾಕರಣದಿಂದ, ಬಂಗಾರ ಬೆಂಕಿಯಿಂದ, ಮೈಮನಸ್ಸುಗಳು ಗರ್ಭಾಧಾನದಿಂದ ಕಾಲೋಚಿತ ಸಂಸ್ಕಾರ ವಿಶೇಷಗಳಿಂದ ಪರಿಪೂರಿತವಾಗಿ ಪ್ರಭಾಪೂರ್ಣವಾಗುತ್ತವೆ.
    ’ಕೃ’ ಧಾತುವಿನಿಂದ ’ಸಮ್’ ಉಪಸರ್ಗದೊಂದಿಗೆ ಮೂಡಿ ಬಂದ ಸಂಸ್ಕಾರ ಪದಕ್ಕೆ ಚೆನ್ನಾಗಿ ಮಾಡು, ಹದ ಮಾಡು, ಶಿಕ್ಷಣ, ಶಿಷ್ಟಾಚಾರ, ಗುಣೋತ್ಕರ್ಷ, ಒಪ್ಪ ಹಾಕು, ಅಲಂಕಾರ, ಅನುಭವ, ಪ್ರಭಾವ, ಪವಿತ್ರೀಕರಣ, ಪೋಷಣೆ, ಪ್ರಾಯಶ್ಚಿತ್ತ ಮುಂತಾದ ಅನೇಕಾರ್ಥಗಳಿದ್ದರೂ ’ಕಾರ್ಯ: ಶರೀರ ಸಂಸ್ಕಾರ: ಪಾವನಃ ಪ್ರೇತ್ಯಚೇಹಚ’ ಎಂಬ ಮನುವಿನ ಮತದಂತೆ ವೇದ ಮಂತ್ರಗಳಿಂದ ಸುಕೃತ ಕರ್ಮಗಳಿಂದ ಮಾಡಲ್ಪಡುವ ನಿಷೇಕಾದಿ ಶರೀರ ಸಂಸ್ಕಾರಗಳೆಂಬ ಅರ್ಥವನ್ನೇ ಪ್ರಕೃತ ಗ್ರಹಿಸಬೇಕು.
    ದೋಷಾಪನಯನ (ದೋಷ ಪರಿಹಾರ) ಗುಣಾಧಾನ (ಗುಣಾವಿಷ್ಕಾರ)ಗಳೇ ಸಂಸ್ಕಾರದ ಪರಮ ಚರಮ ಪ್ರಯೋಜನಗಳು. ಕೊಳೆ ತೊಳೆದು ಕಳೆಏರಿಸುವುದು, ಮೈಲಿಗೆ ತೆಗೆದು ಮಡಿ ಮಾಡುವುದು, ಮಾಲಿನ್ಯ ತೊಡೆದು ಮಹಿಮೆಯನ್ನಿಡುವುದು, ಸುಪ್ತವಾಗಿರುವ ಸದ್ವೃತ್ತಿಗಳನ್ನು ಉದ್ದೀಪಿಸುವುದು. ಇದೇ ಸಂಸ್ಕಾರಗಳ ಲಕ್ಷ್ಯ.
    ಹುಳುಕಿಲ್ಲದ ಒಳ್ಳೆಯ ಬೆಳೆಯನ್ನು ಪಡೆಯಬೇಕಾದರೆ ಮೊದಲು ಹೊಲವನ್ನು ಸುಟ್ಟೋ ಉತ್ತೋ ಬೀಜವನ್ನು ಬಿತ್ತಬೇಕು. ಮತ್ತೆ ನೀರುಣಿಸಿ ಗೊಬ್ಬರವಿಟ್ಟು ಮೈಯ್ಯೆಲ್ಲಾ ಕಣ್ಣಾಗಿ ಕಾದರೆ ಫಲಸಮೃದ್ಧಿಯನ್ನು ಪಡೆಯಬಹುದು. ಗುಡಿಸಿ ಸಾರಿಸಿದ ನೆಲದಲ್ಲಿ ರಂಗೋಲಿ ಇಟ್ಟರೆ ಹೇಗೆ ಸ್ಫುಟವಾಗಿ ಸುಂದರವಾಗಿ ಮೂಡಿಬರುವುದೋ ಅಂತೆಯೇ ಮೊದಲು ಪಾಪ ಅಥವಾ ದೋಷವನ್ನು ಕಿತ್ತೆಸೆದು ಬಳಿಕ ಸುಕೃತ ಅಥವಾ ಗುಣವನ್ನು ಆವಾಹಿಸಬೇಕು. ಪ್ರತಿ ಸಂಸ್ಕಾರದಲ್ಲೂ ಈ ಎರಡಂಶಗಳೂ ಸಮಗ್ರವಾಗಿ ಇಲ್ಲವೇ ಆಂಶಿಕವಾಗಿ ಇದ್ದೇ ಇರುತ್ತವೆ. ಸಂಸ್ಕಾರಗಳ ಗುರಿ ದೇಹಶುದ್ಧಿ ಮಾತ್ರವಲ್ಲ ಅವು ಸಂಸ್ಕಾರ್ಯನ ವ್ಯಕ್ತಿತ್ವದಲ್ಲೊಂದು ಶ್ರೇಷ್ಠತೆಯನ್ನೂ ಅರ್ಹತೆಯನ್ನೂ ಪ್ರಭೆಯನ್ನೂ ಮಾಂಗಲ್ಯವನ್ನೂ ಮುಖ್ಯವಾಗಿ ಸಮುದಾಯದ ಸಂಪರ್ಕವನ್ನೂ ಶುಭಸಂಸರ್ಗವನ್ನು ತಂದುಕೊಡುತ್ತವೆ ಹಾಗೂ ತುಂಬಿಕೊಡುತ್ತವೆ.
    ಸಂಸ್ಕಾರಗಳ ಸಂಖ್ಯಾವಿಷಯದಲ್ಲಿ ಪ್ರಾಚೀನರಲ್ಲೇ ಭಿನ್ನಾಭಿಪ್ರಾಯಗಳಿವೆ. ಪ್ರಸಿದ್ಧವಾದ ಷೋಡಶ ಸಂಸ್ಕಾರಗಳ ನಾಮಾನುಕ್ರಮಣಿಕೆಯಲ್ಲೇ ಏಕಾಭಿಪ್ರಾಯ ಕಂಡು ಬರುವುದಿಲ್ಲ. ಈ ಹದಿನಾರರೊಂದಿಗೆ ಇಪ್ಪತ್ತನಾಲ್ಕು ಯಾಜ್ಞಿಕ ಸಂಸ್ಕಾರಗಳೂ ಎಂಟು ಆತ್ಮಗುಣಗಳೂ ಸೇರಿ ೪೮ ಸಂಸ್ಕಾರಗಳೆಂಬುದು ಅತ್ಯಂತ ಪ್ರಾಚೀನವಾದ ಗೌತಮ ಧರ್ಮಸೂತ್ರದ ಮತ. ಆಂಗಿರಸರ ಪ್ರಕಾರ ೨೫. ಬೋಧಾಯನರ ಪ್ರಕಾರ ೧೬.
    ಹಾರೀತ ಮುನಿಯು ಹೇಳುವಂತೆ - "ದ್ವಿವಿಧ ಸಂಸ್ಕಾರೋಭವತಿ ಬ್ರಾಹ್ಮೋದೈವಶ್ಚ ಗರ್ಭಾದಾನಾದಿ ಸ್ಮಾರ್ತೋಬ್ರಾಹ್ಮಃ" - ಸಂಸ್ಕಾರಗಳು ಬ್ರಾಹ್ಮ ದೈವಗಳೆಂದು ಇಬ್ಬಗೆ. ಯಜ್ಞಾದಿಗಳ ಸಮಾವೇಶ ದೈವ ಮಾನುಷ ಜೀವನದಲ್ಲಿ ನಡೆಸುವ ಸಂಸ್ಕಾರ ಬ್ರಾಹ್ಮ. ಯಜ್ಞವು ಪರೋಕ್ಷವಾಗಿ ಮನುಷ್ಯನ್ನನು ಪವಿತ್ರೀಕರಿಸುವುದಾದರೂ ಬ್ರಾಹ್ಮವನ್ನೇ ಯಥಾರ್ಥವಾಗಿ ಸಂಸ್ಕಾರವೆಂದು ತಿಳಿಯಬೇಕು. ಇದೀಗ ಅಂತ್ಯೇಷ್ಟಿಯೂ ಸೇರಿದಂತೆ ಪ್ರಚಲಿತವಿರುವ ಸಂಸ್ಕಾರಗಳು ಹದಿನಾರು. ಇವನ್ನು ಐದು ಹಂತಗಳಲ್ಲಿ ವಿಭಜಿಸಬಹುದು.
    ೧.    ಜನನಪೂರ್ವ ಸಂಸ್ಕಾರಗಳು : -  ಗರ್ಭಾಧಾನಾದಿ ಸೀಮನ್ತೋನ್ನಯನ ಪರ್ಯಂತ. ಮೂರು.
    ೨.    ಬಾಲ್ಯ ಸಂಸ್ಕಾರಗಳು : - ಜಾತ ಕರ್ಮಾದಿ ಚೌಲಾಂತ ಆರು.
    ೩.    ವಿದ್ಯಾಭ್ಯಾಸ ಸಂಸ್ಕಾರಗಳು : - ಅಕ್ಷರಾಭ್ಯಾಸಾದಿ ಸಮಾವರ್ತನ ಪರ್ಯನ್ತ ಐದು.
    ೪.    ವಿವಾಹ ಸಂಸ್ಕಾರ : - ಗೃಹಸ್ಥಾಶ್ರಮ ಸ್ವೀಕಾರ.
    ೫.    ಅಂತ್ಯೇಷ್ಟಿ : - ಮರಣಾನಂತರ ನಡೆಸಬೇಕಾದ ವಿಧಿವಿಧಾನಗಳು.
    ಸಂಸ್ಕಾರಗಳು ನಿಂತಿರುವುದು ಧರ್ಮಶ್ರದ್ಧೆಯ ಅಡಿಗಲ್ಲಿನ ಮೇಲೆ. ಪ್ರತಿಯೊಂದಕ್ಕೂ ಭೌತಿಕವಾದ ಹೊಲಬನ್ನು ತೋರಿಸುವುದು ದು:ಸಾಧ್ಯ. ಇಂದಿಲ್ಲವಾದರೆ ಮುಂದೆ ಈ ಜನ್ಮದಲ್ಲಿಲ್ಲವಾದರೆ ಮುಂದಣ ಜನ್ಮದಲ್ಲಿ ಕರ್ಮಕ್ಕಂತೂ ಫಲ ಇದ್ದೇ ಇದೆ. ದೃಷ್ಟಫಲವಿಲ್ಲದಲ್ಲಿ ಅದೃಷ್ಟಫಲ ಕಲ್ಪಿಸಬೇಕೆಂಬುದು ಮೀಮಾಂಸಕ ಮತ. ಎಲ್ಲಿ ಕರ್ಮಕ್ಕೆ ಸದ್ಯಃಫಲ ತೋರಿಬರುವುದಿಲ್ಲವೋ ಅಲ್ಲಿ ಅಪೂರ್ವವನ್ನು ಒಪ್ಪಬೇಕು. ಸಾವಿನೊಂದಿಗೆ ಬದುಕು ಮುಗಿದೇ ಹೋಯಿತೆಂಬುದನ್ನು ಪುನರ್ಜನ್ಮವನ್ನು ಒಪ್ಪುವ ಭಾರತೀಯರು ನಂಬುವುದಿಲ್ಲ.
    ಜಾತಸ್ಯವೈ ಮನುಷ್ಯಸ್ಯ ದ್ವೌ ಸಂಸ್ಕಾರೌ ಋಣೀಭೂತೌ ಭವತಃ ಜಾತಸಂಸ್ಕಾರೋ ಮೃತಸಂಸ್ಕಾರಶ್ಚೇತಿ. ಜಾತಸಂಸ್ಕಾರೇಣ ಇಮಂ ಲೋಕಂ ಅಭಿಜಯತಿ ಮೃತಸಂಸ್ಕಾರೇಣ ಅಮುಂ ಲೋಕಂ - ಇತಿ ಹುಟ್ಟಿದ ವ್ಯಕ್ತಿ ಜಾತ/ಮತಸಂಸ್ಕಾರಗಳಿಗೆ ಋಣಿಯಾಗಿರುತ್ತಾನೆ. ಸಂಸ್ಕಾರಗಳನ್ನು ಪಡೆದಾತ ಇಹ/ಪರ ಲೋಕಗಳಲ್ಲಿ ವಿಜಯಿಯಾಗುತ್ತಾನೆ. "ಸಂಸ್ಕಾರಃ ಪಾವನಃ ಕಾರ್ಯಃ ಭೋಗ ಮೋಕ್ಷ ಫಲಪ್ರದಃ" ತ್ಯಾಗ ಭೋಗಗಳ ಸಮನ್ವಯ ವಿಧಾನವನ್ನು ಬೋಧಿಸುವ ಸಂಸ್ಕಾರ ಕಾರ್ಯವು ಪಾವನವಾದುದು.
    ಬಗೆಬಗೆಯ ಬಣ್ಣಗಳು ಒಗ್ಗೂಡಿ ಚಿತ್ರವೊಂದು ರೂಪುಗೊಳ್ಳುವಂತೆ ಸಂಸ್ಕಾರಗಳಿಂದ ಸ್ವಭಾವವು ಮೂಡಿ ಬರುತ್ತದೆ. ಕಠಿನವಾದ ಕಲ್ಲಾದರೂ ಸತತ ನೀರಧಾರೆ ಹಿಡಿಯುವುದರಿಂದ ನುಣುಪಾಗುತ್ತದೆ. ಪ್ರಾಚೀನ ಮುನಿಗಳು ತತ್ಕಾಲೀನ ಸಮಾಜದಲ್ಲಿ ಹುಟ್ಟಿದ ವ್ಯಕ್ತಿಯ ಗುಣಧರ್ಮಗಳನ್ನು ಆತನಿಗೂ ಸಮಾಜಕ್ಕೂ ಹಿತವಾಗುವಂತೆ ವಿಹಿತವಾಗುವಂತೆ ಮಾರ್ಪಡಿಸಲು ನೇರ್ಪಡಿಸಲು ಶ್ರಮಿಸಿದರು.
    ಸ್ವಾಧ್ಯಾಯೇನ ವ್ರತೈರ್ಹೋಮೈಃ ತ್ರೈವಿದ್ಯೇ ನೇಜ್ಯಯಾ ಸುತೈಃ | ಮಹಾಯಜ್ಞೈಶ್ಚ ಯಜ್ಞೈಶ್ಚ ಬ್ರಾಹ್ಮೀಯಂ ಕ್ರಿಯತೇ ತನುಃ ||
    ವೇದಾಧ್ಯಯನ, ವ್ರತ, ಸಮರ್ಪಣೆ, ಹೋಮ, ವಂಶವೃದ್ಧಿ, ಪಂಚಯಜ್ಞಗಳಿಂದ ಈ ಭೌತಿಕ ದೇಹವು ಬ್ರಹ್ಮ ಸಾಕ್ಷಾತ್ಕಾರಕ್ಕೆ ಯೋಗ್ಯವಾದ ಸಾಧನವಾಗುತ್ತದೆಂಬುದು ಮನುವಿನ ಮಾತು. ಈ ದೇಹ ನಿರರ್ಥಕವೆಂದು ಕಡೆಗಣಿಸದೇ ಅದನ್ನು ಶುದ್ಧೀಕರಿಸಿ ದೇಹೋ ದೇವಾಲಯ ಪ್ರೋಕ್ತಃ ದೇಹವನ್ನೇ ದೇಗುಲವಾಗಿಸಿ ಭಗವಂತನ ಆವಾಸಕ್ಕೆ ಅನುಕೂಲವಾಗುವಂತೆ ಸಜ್ಜುಗೊಳಿಸಿ ಮಾನವನು ಮಾಂಗಲ್ಯ ಮಂದಿರವಾಗುವಂತೆ ಮಾಡುವುದೇ ಸಂಸ್ಕಾರಗಳ ಪರಮ-ಪ್ರಧಾನ ಲಕ್ಷ್ಯ.

No comments:

Post a Comment