Sunday, October 10, 2010

ಅಮ್ಮಾ

   "ಅಮ್ಮಾ" ಎಂದರೆ ಕಾರುಣ್ಯದ ಕಡಲು, ವಾತ್ಸಲ್ಯದ ಒಡಲು, ಮಮತೆಯ ಮಡಿಲು, ಭರವಸೆಯ ಬಸಿರು, ಬದುಕಿನ ಉಸಿರು, ಬೇಗೆ - ಬೇನೆ - ಬೇಸರಿಕೆ - ಬೆದರಿಕೆಗಳು ಬೆನ್ನಟ್ಟಿ ಬಂದು ಸುಟ್ಟುರುಹಿ ಬೂದಿ ಮಾಡದಂತೆ ತನ್ನ ಕರುಳ ಕುಡಿಗಳ ತನು ಮನಗಳಿಗೆ ತಂಪೆರೆದು ನೆರಳೀವ ಹಸಿರು.

    ನಾವಿಂದು ತೊದಲದೇ ತಡವರಿಸದೇ, ತಪ್ಪಿಲ್ಲದೇ, ನಾಲಗೆಗೆಡದೇ ನೆಟ್ಟಗೆ ನಾಲ್ಕು ಮಾತುಗಳನ್ನು ನುಡಿಯುತ್ತಿದ್ದರೆ , ಎಡವದೇ ತೊಡರದೇ ಕಾಲ್ಗೆಡದೇ ಕಂಗೆಡದೇ ನೆಲದಲ್ಲಿ ಗಟ್ಟಿಯಾಗಿ ಹೆಜ್ಜೆಯೂರಿ ನಡೆಯುತ್ತಿದ್ದರೆ; ನಮ್ಮ ಬೆನ್ನನ್ನು ನಾವೇ ಉಜ್ಜಿಕೊಳ್ಳುತ್ತಿದರೆ; ಎತ್ತಿದ ತುತ್ತನ್ನು ಬಾಯಿಗಿಟ್ಟು ಮೈ ಮುಸರೆ ಮಾಡಿಕೊಳ್ಳದೇ ಮಂದಿ ಮೆಚ್ಚುವಂತೆ ಮುಚ್ಚಟೆಯಾಗಿ ಚೊಕ್ಕವಾಗಿ ಉಣ್ಣುತ್ತಿದ್ದರೆ; ಸಿಡುಕದೇ ದುಡುಕದೇ ಮಿಡುಕದೇ ದುಡಿದು ದಣಿಯದೇ ಮುದುಡಿ ಮೂಲೆಸೇರದೇ ಮುಗುಳು ನಗುತ್ತಾ ನೆರೆಯವರೊಂದಿಗೆ ಒಂದಾಗಿ ಹೊಂದಿಕೊಂಡು ಬಾಳುತ್ತಿದ್ದರೆ; ಇದಕ್ಕೆ ಕಾರಣ ನಮ್ಮ ವಿದ್ಯಾ ಬುದ್ಧಿ ಸಾಹಸ ಸಂಕಲ್ಪ ಶಕ್ತಿಸಾಧನೆಗಳು ಅಲ್ಲವೇ ಅಲ್ಲ.

    ನಮ್ಮನ್ನು ಒಂಬತ್ತು ತಿಂಗಳೂ ಹೊಟ್ಟೆಯಲ್ಲಿ ಹೊತ್ತು, ಬಳಿಕ ಹೆತ್ತು, ಹೊಲಸು ಹೇಸಿಗೆಗಳನ್ನೆಲ್ಲ ಹೀಕರಿಸದೇ ಬಾಚಿ, ಮೊಲೆಯುಣಿಸಿ, ಹೊತ್ತುಹೊತ್ತಿಗೆ ಹಿತವಾದ ತುತ್ತನ್ನಿತ್ತು, ಮೈಗೆ ಎಣ್ಣೆಯೊತ್ತಿ,  ಕೈ ಕಾಲು ಹಣೆ ಹುಬ್ಬು ಕಣ್ಣು ಮೂಗುಗಳನ್ನು ತಿದ್ದಿ ತೀಡಿ, ನಮ್ಮ ಬೊಬ್ಬೆ ಅಬ್ಬರ-ಆರ್ಭಟ-ಅಳು-ಹಟ-ತಂಟೆ-ತುಂಟಾಟ-ರಂಪಾಟಗಳಿಗೆ ಕಣ್ಣು ಕೆಂಪು ಮಾಡದೇ, ಕೋಪಿಸಿಕೊಳ್ಳದೇ, ಕಂಬನಿ ಬರಿಸುವ ನಮ್ಮ ಕಾಡ ಕಡು ಹಿಂಸೆಗಳನ್ನು ನಗುನಗುತ್ತಾ ನುಂಗಿಕೊಂಡು; ಕೈಯ್ಯ ಕಂದನನ್ನು ತೊಡೆಯಲ್ಲಿಟ್ಟು ತಟ್ಟಿ, ತೊಟ್ಟಿಲಲ್ಲಿಟ್ಟು ತೂಗಿ, ಕೈಗೊಟ್ಟು ಮೆಟ್ಟಿಲೇರಿಸಿ, ನೆಟ್ಟಗೆ ನಿಲ್ಲಿಸಿ, ಅಟ್ಟವೇರುವಷ್ಟು ಎತ್ತರಕ್ಕೆ ಬೆಳೆಸಿ, ಕುರುಡು ಕವಡೆಯಷ್ಟೂ ಪ್ರತಿಫಲವನ್ನು ನಿರೀಕ್ಷಿಸದೇ, ನಿತ್ಯ ನಿರಂತರ ತನ್ನ ಕರುಳ ಬಳ್ಳಿಗಳ ಒಳಿತನ್ನಷ್ಟೇ ಹಾರೈಸುತ್ತಿರುವ ತ್ಯಾಗದ ಪ್ರತಿಮೂರ್ತಿಯಾದ ತಾಯಿ, ಅಮ್ಮಾ ಎಂದರೆ ನಮ್ಮ ಬದುಕಿನ ಅಮೃತ, ಆನಂದ.

    ಮುಪ್ಪಿನ ತಾಯ್ತಂದೆಯರನ್ನು ವೃದ್ಧಾಶ್ರಮಕ್ಕೆ ತಳ್ಳಿ ಒಂದಿಶ್ಟು ಕಾಸುಗಳನ್ನೆಸೆದು ಕೈ ತೊಳೆದುಕೊಳ್ಳುವ, ನಮ್ಮ ಕರ್ತವ್ಯ ನಾವು ಮಾಡಿದ್ದೇವೆಂದು ಹಮ್ಮು ಕೊಚ್ಚುವ ನವನಾಗರಿಕರು ತಮ್ಮ ಜೀವನದ ಯಶಸ್ಸಿಗೆ ಸಾಧನೆಗೆ ಸೌಂದರ್ಯಕ್ಕೆ ಸುಖ ಸೌಕರ್ಯಗಳಿಗೆ ಆಯತನವಾಗಿದ್ದವಳು ಆತ್ಮವಾಗಿದ್ದವಳು ಅನ್ನವಾಗಿದ್ದವಳು ಅಮ್ಮ ಎಂಬುದನ್ನೇ ಮರೆಯುತ್ತಾರೆ? ಒಂದು ಕೂಸನ್ನು ಹೆರುವ , ಹೊತ್ತು ಆಕೆ ಅನುಭವಿಸುವ ವೇದನೆ ಯಾತನೆಗಳೆಷ್ಟೆಂಬುದರ ಅರಿವಿರುವುದು ಇನ್ನೋರ್ವ ತಾಯಿಗೆ ವಿನಾ ಉಳಿದವರಿಗಲ್ಲ. ಅದನ್ನ ಭಾಷೆಯಿಂದ ಬಣ್ಣಿಸುವುದು ಆಗದ ಮಾತು.

    ತಾಯಿ, ತಂದೆ, ಗುರು - ಈ ಮೂರು ಮಂದಿಯ ಋಣವನ್ನು ನೂರು ಜನ್ಮವೆತ್ತಿದರೂ ತೀರಿಸಲು ಸಾಧ್ಯವಿಲ್ಲವೆನ್ನುತ್ತದೆ ಶಾಸ್ತ್ರ. "ನ ಮಾತುಃ ಪರದೈವತಮ್" ತಾಯಿಗಿಂತ ಮಿಗಿಲಾದ ದೇವರಿಲ್ಲ.

    ’ಮಾತಾಕಿಲ ಮನುಷ್ಯಾಣಾಂ ದೇವತಾನಾಂ ಚ ದೈವತಮ್’ ತಾಯಿ ಮನುಷ್ಯರಿಗೆ ಮಾತ್ರವಲ್ಲ ದೇವತೆಗಳಿಗೆ ದೇವತೆ. ಇದು ಭಾಸನ ಸೂಕ್ತಿ. ಮಧ್ಯಮ ವ್ಯಾಯೋಗದ ಘಟೋತ್ಕಚನ ಮಾತು.  "ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ" ಎಂಬುದು ಸ್ಮೃತಿ ವಚನ. ತಾಯಿ ತಂದೆಯನ್ನೂ, ತಂದೆ-ಗುರುವನ್ನೂ, ಗುರು ದೇವರನ್ನೂ ತೋರಿಸುತ್ತಾರೆ. ಗುರುವಿಗಿಂತ ನೂರ್ಮಡಿ ತಂದೆಯೂ ತಂದೆಗಿಂತ ನೂರ್ಮಡಿ ತಾಯಿಯೂ ಗೌರವದಲ್ಲಿ ಹಿರಿದು.

    ಸಂಪ್ರದಾಯ ಜಡರಾದ ವೈದಿಕ ಹಾಗೂ ಸಾಮಾಜಿಕರ ವಿರೋಧ ನಿರೋಧಗಳನ್ನೂ ಲೆಕ್ಕಿಸದೇ ಸಂನ್ಯಾಸಿಯಾಗಿದ್ದರೂ ತಾಯಿ ಚಿತೆಗೆ ಅಗ್ನಿಸ್ಪರ್ಶ ಮಾಡಿ ಅಂತ್ಯ ಸಂಸ್ಕಾರಗೈದ ಆಚಾರ್ಯ ಶಂಕರರು ತಮ್ಮ ಮಾತೃ ಪಂಚಕ ಸ್ತೋತ್ರದಲ್ಲಿ ಹೆತ್ತಬ್ಬೆಯ ಋಣ ಎಂದಿಗೂ ತೀರಿಸಲಾಗದ್ದೆಂದು ಹೀಗೆ ನುತಿಸಿ ನಮಿಸಿದ್ದಾರೆ,

 ಆಸ್ತಾಂ ತಾವದಿದಂ ಪ್ರಸೂತಿಸಮಯೇ ದುರ್ವಾರಶೂಲವ್ಯಥಾ
 ನೈರುಚ್ಯಂ ತನುಶೋಷಣಂ ಮಲಮಯೀ ಶಯ್ಯಾ ಚ ಸಾಂವತ್ಸರೀ |
 ಏಕಸ್ಯಾಪಿ ನ ಗರ್ಭಭಾರಭಾರಣಕ್ಲೇಶಸ್ಯ ಯಸ್ಯಾಃ ಕ್ಷಮಃ
 ದಾತುಂ ನಿಷ್ಕೃತಿಮುನ್ನತೋಪಿ ತನಯಃ ತಸ್ಯೈ ಜನನ್ಯೈ ನಮಃ ||೧||